Kagga Logo

Inner vision

64

68

64

ಚಿತ್ತದನುಭವ ಭಾವ ಸಂಭಾವನೆಗಳೆಲ್ಲ ।
ಭತ್ತವದನು ವಿಚಾರಯುಕ್ತಿಗಳು ಕುಟ್ಟೆ ॥
ತತ್ತ್ವತಂಡುಲ ದೊರೆಗುಮದು ವಿವೇಚಿತತತ್ತ್ವ ।
ನಿತ್ಯ ಭೋಜನ ನಮಗೆ - ಮಂಕುತಿಮ್ಮ ॥ ೬೪ ॥

ನಮ್ಮ ಮನಸ್ಸಿನಲ್ಲಿ ಬರುವ ಭಾವ, ಅನುಭವ ಮತ್ತು ಆಲೋಚನೆಗಳೆಲ್ಲ ಬತ್ತದಂತೆ. ಅದನ್ನು ಯುಕ್ತಿ ಮತ್ತು ವಿಚಾರವೆಂಬ ಒನಕೆಗಳಿಂದ ಕುಟ್ಟಿದರೆ ತತ್ವವೆಂಬ ಅಕ್ಕಿ ನಮಗೆ ದೊರೆಯುವುದು. ಹಾಗೆ ದೊರೆತ ಅಕ್ಕಿರೂಪದ ತತ್ವವೇ ನಮ್ಮ ಭೌದ್ಧಿಕತೆಗೆ ಆಹಾರ ಎಂಬುದೇ ಈ ಕಗ್ಗದ ತಾತ್ಪರ್ಯ. ನಮ್ಮ ಮಾನಸಿಕತೆಯಲ್ಲಿ ನಮ್ಮ ವಿಚಾರ ಮಂಥನಕ್ಕೆ ಒತ್ತು ಕೊಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ .

Our experiences, feelings and merits are like paddy (with husk). One must beat with examination and arguments. Only then one will get conviction on his own philosophy. Only such a theory can be called as well-thought one. That will be the food for thought every day. - Mankutimma

65

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ ।
ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ॥
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ ।
ಶಾಸ್ತ್ರಿತನದಿಂದಲ್ಲ - ಮಂಕುತಿಮ್ಮ ॥ ೬೫ ॥

ಪುಸ್ತಕಗಳನ್ನು ಓದಿ ಪಡೆದುಕೊಂಡ ಪಾಂಡಿತ್ಯ ತಲೆಯಮೇಲೆ ತಂದಿಟ್ಟುಕೊಂಡಂತ ಕಿರೀತದಲ್ಲಿನ ಮಣಿಯಂತೆ. ಆದರೆ ನಮ್ಮ ಅನುಭವಗಳನ್ನು ವಿಚಾರದ ಒರೆಗೆ ಹಚ್ಚಿ ನಮ್ಮ ಚಿತ್ತದಲ್ಲಿ ನಮಗೆ ಸ್ಫುರಿಸಿದ ಜ್ಞಾನ, ತನ್ನ ಸ್ವಾಭಾವಿಕ ಗುಣಕ್ಕೆ, ಮಣ್ಣಿನ ಸಾರ, ಪರಿಸರದ ಪ್ರಭಾವದಿಂದ ತನ್ನೊಳಗಿಂದಲೇ ವಿಕಸಿತವಾಗುವ ಒಂದು ಗಿಡದ ” ಪುಷ್ಪದಂತೆ” ಎನ್ನುತಾರೆ, ಮಾನ್ಯ ಗುಂಡಪ್ಪನವರು.

Knowledge obtained from reading books is like an ornament on top of the head. It's only external. Knowledge that grows from contemplation, is like a flower on a tree. The realization of the truth can only be attained by looking inwards. Not just by being called "well-educated". - Mankutimma

66

ವ್ಯರ್ಥವೆಂದೆನಿಪುದಲ ಸೃಷ್ಟಿಯಲಿ ಬಹುಭಾಗ? ।
ಅರ್ಥವೇಂ ಕ್ರಿಮಿಕೀಟಕೋಟಿ ರಚನೆಯಲಿ? ॥
ಕರ್ತನಾಲೋಚಿಸದ ದುಂದಿನವನೆಂಬ ನುಡಿ ।
ಯರ್ಧದೃಷ್ಟಿಯ ವಿವರ - ಮಂಕುತಿಮ್ಮ ॥ ೬೬ ॥

“ವ್ಯರ್ಥವೆಂದೆನಿಸುತ್ತದೆ ಸೃಷ್ಟಿಯಲಿ ಬಹುಭಾಗ, ಈ ಕ್ರಿಮಿ ಕೀಟ ಕೋಟಿಗಳ ಸೃಷ್ಟಿಯಲಿ ಅರ್ಥವೇನು ? ಆ ಸೃಷ್ಟಿಕರ್ತನು ಈ ಸೃಷ್ಟಿಯನ್ನು ರಚಿಸುವಾಗ ತನ್ನ ಶಕ್ತಿಯ ದುಂದುಪಯೋಗ ಮಾಡಿರಬಹುದೆಂದು ಯಾರಾದರೂ ಆಲೋಚಿಸಿದರೆ ಅದು ಅವರ ಅಪರಿಪೂರ್ಣ ಜ್ಞಾನದ, ಯೋಚನಾ ದಾರಿದ್ರ್ಯದ ಸೂಚಕವೆಂದು ಈ ಕಗ್ಗದ ಹೂರಣ.

Why does most things in this creation seem to be a waste? What is the meaning of crores of these minute creatures - worms and insects? If we say the creator a spend thrift who has did not plan this creation well - we would describing the half truth. [Translator's note: In this creator's universe all creatures are created equal. There is harmony and every creature has its role to play. One cannot claim anything in this creation as waste.] - Mankutimma

67

ಸ್ರಷ್ಟುಸಂಕಲ್ಪಲಿಪಿಯೆಲ್ಲ ನಮ್ಮೆದುರಿಲ್ಲ ।
ದೃಷ್ಟಿಗೋಚರವದರೊಳೊಂದು ಗೆರೆ ಮಾತ್ರ ॥
ಅಷ್ಟರಿಂದಿದು ನಷ್ಟವದು ಶಿಷ್ಟವೆನ್ನುವುದೆ? ।
ಕ್ಲಿಷ್ಟದ ಸಮಸ್ಯೆಯದು - ಮಂಕುತಿಮ್ಮ ॥ ೬೭ ॥

“ಜಗತ್ತು ಸೃಷ್ಟಿಯಾಗುವ ಮುಂಚಿನ ಲೇಖಾ ಅಥವಾ ರೇಖಾ ಚಿತ್ರ ನಮ್ಮ ಬಳಿ ಇಲ್ಲ. ನಾವು ಕಾಣಲಾಗಿರುವುದು ಒಂದು ಬೃಹತ್ ಚಿತ್ರದಲ್ಲಿ ಒಂದೇ ಗೆರೆ ಮಾತ್ರ. ಅಷ್ಟು ಸಣ್ಣ ಗೆರೆಯನ್ನು ಕಂಡು ನಾವು ಈ ಸೃಷ್ಟಿಯನ್ನು ಕುರಿತು ವ್ಯಾಖ್ಯಾನ ಮಾಡುತ್ತಾ, ಇದು ಸರಿ ಇದು ಸಪ್ಪು ಎನ್ನುವುದು ಸರಿಯೇ?” ಎಂದು ಕೇಳುತ್ತ, ಇದು ಬಹಳ ಕ್ಲಿಷ್ಟದ ಸಮಸ್ಯೆ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲಿ.

We do not have the entire blueprint/script of this creation in front of us. All we see could well be just a line of the entire blueprint. Just by that little information, how can we say one thing is bad and other is good? This is a tough confusing world. - Mankutimma

68

ಎಲ್ಲ ಅರೆಬೆಳಕು ಅರೆಸುಳಿವು ಅರೆತಿಳಿವಿಲ್ಲಿ ।
ಎಲ್ಲಿ ಪರಿಪೂರಣವೊ ಅದನರಿಯುವನಕ ॥
ಸೊಲ್ಲಿಸುವರಾರು ಸೃಷ್ಟಿಯ ಪೇಟಿಯೊಳಗುಟ್ಟ? ।
ಎಲ್ಲ ಬಾಳು ರಹಸ್ಯ - ಮಂಕುತಿಮ್ಮ ॥ ೬೮ ॥

ಎಲ್ಲ ವಿಷಯಗಳಲ್ಲೂ ಅರೆ ಬರೆ ಜ್ಞಾನ ಮತ್ತು ತಿಳುವಳಿಕೆ. ಆ ತಿಳುವಳಿಕೆಯನ್ನು ಪಡೆವ ಮಾರ್ಗಗಳೂ ಸಹ ಅರ್ದಂಬರ್ದ ಮತ್ತು ಯಾವುದೂ ನಿಚ್ಚಳವಲ್ಲ. ಅದು ನಮಗೆ ಸಂಪೂರ್ಣ ಜ್ಞಾನ ಬರುವ ತನಕ ಹಾಗೇ ಇರುತ್ತದೆ. ಆದರೆ ನಮಗೆ ಆ ಪರಿಪೂರ್ಣಜ್ಞಾನವನ್ನು ಹೇಳಿಕೊಡುವವರಾರು. ಈ ಜೀವನವೆಲ್ಲ ಒಂದು ನಿಗೂಢ ಅಥವಾ ರಹಸ್ಯ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

It's all half lighted here, half clues, half knowledge. No one knows where is the complete truth. Untill we know that, who is going to teach us about the mystery of this creation (kept hidden in the box)? All life is a mystery. - Mankutimma